baby 015

ನನ್ನ ಹೆಸರು…….ಏನೆಂದು ಅಪ್ಪ-ಅಮ್ಮ, ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡಮ್ಮ, ಬಂಧು-ಬಳಗ, ಮಿತ್ರವೃಂದ ಯಾರೂ ಇನ್ನೂ ಫೈನಲೈಸ್ ಮಾಡಿಲ್ಲ. ಆದರೆ ಪ್ರತಿಯೊಬ್ಬರ ಬಳಿಯೂ ಕನಿಷ್ಟ ಡಜನ್ ಹೆಸರುಗಳಿವೆ. ಏನು ಹೆಸರಿಡುತ್ತಾರೋ ಗೊತ್ತಿಲ್ಲ. ಏನೇ ಇಟ್ಟರೂ ನಾನು ಮಾತ್ರ ಖುಷಿಯಿಂದ ಸ್ವೀಕರಿಸಲು ಸಿದ್ಧ. ನೀವೇ ಹೇಳಿ ಎಷ್ಟು ದಿನಾ ಅಂತ ಮನೆಯರಿಂದ ನನ್ನನ್ನು ನೋಡಲು ಬಂದವರಿಂದ ಪುಟ್ಟ, ಕಂದ, ಶೋನು, ಚಿನ್ನ, ರನ್ನ, ಗುಬ್ಬಿ, ಬಂಗಾರ, ಗುಂಡಣ್ಣ, ಪಾಪು, ಆಲೂಬಾದಿ, ಶಂಭುಲಿಂಗ ಎಂದೆಲ್ಲ ಕರೆಸಿಕೊಳ್ಳುವುದು? ಆಫ್ಟರ್ ಆಲ್ ನನಗೂ ನನ್ನದೇ ಆದ ಐಡೆಂಟಿಟಿ ಇದೆಯಲ್ಲವೆ?

ಇರಲಿ ಬಿಡಿ ಆ ವಿಷಯ. ಅಂದ ಹಾಗೆ ನಾನು ಒಂದು ತಿಂಗಳು+ ಶಿಶು. (ಮಲಗಿದಲ್ಲಿಯೇ ‘ಶಿ’ ಹಾಗೂ ‘ಶು’ ಮಾಡುವುದರಿಂದ ಈ ಹೆಸರಂತೆ). ಭಾರ ಸುಮಾರು 4 ಕೆಜಿ. ಮೂಗು ಅಪ್ಪನಂತೆ, ಕಣ್ಣು ಅಮ್ಮನಂತೆ ಇವೆ ಎಂದು ನೋಡಿದವರೆಲ್ಲ ಹೇಳುತ್ತಾರೆ. ಈ ಬಗ್ಗೆ ವಾದವಿವಾದಗಳಿದ್ದು, ನನಗೆ ಮಾತನಾಡಲು ಬಂದಬಳಿಕ ಇದನ್ನು ನಾನು ಸಮರ್ಥವಾಗಿ ಬಗೆಹರಿಸುತ್ತೇನೆ.

ಪ್ರಸ್ತುತ ನನಗೆ ಕಂಪ್ಯೂಟರ್ ಆಪರೇಟ್ ಮಾಡಲು ಬರುವುದಿಲ್ಲ. ಇನ್ನೂ ಮಗ್ಗಲಾಗಲು ಬರುವುದಿಲ್ಲ ಎಂದಮೇಲೆ ಹೀಗೆ ಮಾತನಾಡುವುದು ಎಬ್ಸರ್ಡ್ ಎಂದು ಗೊತ್ತು. ಆದರೆ ನನ್ನಪ್ಪ ಕಂಪ್ಯೂಟರ್ ಆನ್ ಮಾಡುತ್ತಿರುವಂತೆ ಒಮ್ಮೆ ಕಣ್ಣರಳಿಸಿ ನೋಡುತ್ತೇನೆ. ಅದರ ಬೆಳಕು ನನ್ನನ್ನು ತೀರ ಆಕರ್ಷಿಸುತ್ತದೆ. ಸಧ್ಯಕ್ಕೆ ನನ್ನ ಬ್ಲಾಗನ್ನು ನನ್ನಪ್ಪನೇ ನೋಡಿಕೊಳ್ಳುತ್ತಾರೆ. ನನ್ನ ಚಟುವಟಿಕೆಗಳನ್ನು ಅವರೇ ಬ್ಲಾಗ್ ನಲ್ಲಿ ದಾಖಲಿಸಲಿದ್ದಾರೆ. ಪ್ರಸ್ತುತ ಅಪ್ಪನಷ್ಟು ನಿರಂತರವಾಗಿ ನಾನು ಬರೆಯುವುದಿಲ್ಲ. ಆದರೂ ಆಗಾಗ್ಗೆ ನನ್ನ ಬ್ಲಾಗ್ ಗೆ ಭೇಟಿ ಕೊಡುತ್ತಿರಿ.

ಇಂತಿ ನಿಮ್ಮವನೇ

ಪುಟ್ಟ, ಕಂದ, ಶೋನು, ಚಿನ್ನ, ರನ್ನ, ಗುಬ್ಬಿ, ಬಂಗಾರ, ಗುಂಡಣ್ಣ, ಪಾಪು, ಆಲೂಬಾದಿ, ಶಂಭುಲಿಂಗ (ಏನಾದರೂ ಕರೆದುಕೊಳ್ಳಿ. ಹೆಸರಿಟ್ಟ ಮೇಲೆ ಅನೌನ್ಸ್ ಮಾಡುತ್ತೇನೆ).